ಕನ್ನಡ ಸಾಹಿತ್ಯಿಕ ಸಾಧನೆಯಿಂದಲೇ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ(94) ಅವರು ವಿಧಿವಶರಾಗಿದ್ದಾರೆ.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೈರಪ್ಪ ಅವರು, ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ ಮೆಮೋರಿಯಲ್ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕನ್ನಡ ಸಾಹಿತ್ಯದ ಸೇವೆಯಲ್ಲಿ ಸದಾ ಮುಂದಿರುತ್ತಿದ್ದ ಭೈರಪ್ಪ ಅವರ ಬರಹಗಳನ್ನು ಓದುವವರ ಸಾಲಿನಲ್ಲಿ ಹೊಸ ಯುಗದ ನವ ಯುವಕರೇ ಹೆಚ್ಚಾಗಿದ್ದರು. ಅವರ ಪ್ರಸಿದ್ಧ ಕೃತಿಗಳನ್ನು ಈಗಲೂ ಹಲವು ಯುವಜನರಿಗೆ ಮೊದಲ ಓದಾಗಿ ಓದುವಂತೆ ಪ್ರೇರಣೆ ನೀಡುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇದೀಗ ಕನ್ನಡ ಸಾಹಿತ್ಯ ಲೋಕದ ಬರವಣಿಗೆಯಲ್ಲಿ ಶಾಶ್ವರ ಪೂರ್ಣ ವಿರಾಮ ಹಾಕಿದ್ದ…
ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಹಿರಿಯ ಸಾಹಿತಿ ಭೈರಪ್ಪ ಇನ್ಮುಂದೆ ನೆನಪು ಮಾತ್ರ.
ಹೇಗಿತ್ತು ಭೈರಪ್ಪನವರ ಜೀವನ?
ಎಸ್.ಎಲ್ ಭೈರಪ್ಪ ಅವರು 1931 ಜುಲೈ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನದಲ್ಲಿ ಹೊಸ ಚಿಗುರು ಎನ್ನುವಂತೆ ಬೆಳೆದರು. ಏಕೆಂದರೆ ಆಗಿನ ಪ್ಲೇಗ್ ಮಾರಿಯಿಂದ ಅವರ ತಾಯಿಯನ್ನು ಕಳೆದುಕೊಂಡರು. ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಂಡರು. ಕಷ್ಟದಲ್ಲೂ ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ 13 ವರ್ಷಗಳು ಅಷ್ಟೇ.
ಪ್ರೌಢ ಶಿಕ್ಷಣ, ಕಾಲೇಜು ಎರಡನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಎಂ.ಎ. ಪದವಿಯನ್ನು ಕೂಡ ಇಲ್ಲಿಯೇ ಪಡೆದರು. ಆದರೆ ಎಂ.ಎ. ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿರುವುದು ಎಸ್.ಎಲ್ ಬೈರಪ್ಪ ಅವರ ಯಶಸ್ಸಿನ ಮೊದಲ ಹೆಜ್ಜೆ ಎನ್ನಬಹುದು. ಮುಂದೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ (Truth and Beauty) ಎಂಬ ಇಂಗ್ಲಿಷ್ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.
ಎಸ್.ಎಲ್. ಭೈರಪ್ಪ ಅವರು ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಾಲೇಜು, ಗುಜರಾತ್ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಯ ಎನ್ಸಿಇಆರ್ಟಿ ಮತ್ತು ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿದ್ದರು. 1991ರಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದರು. ಇದಾದ ಮೇಲೆ ಇವರು ಪತ್ನಿಯೊಂದಿಗೆ ಮೈಸೂರಿನಲ್ಲಿ ವಾಸವಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಕಾದಂಬರಿ
ಭೈರಪ್ಪ ಅವರ ಕೃತಿಗಳನ್ನು ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಟವಾಗಿವೆ. ಭಾರತೀಯ ಅಧ್ಯಯನ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರ ಕೋರ್ಸ್ಗಳಲ್ಲಿ ಕಲಿಸಲಾಗುತ್ತದೆ. ಡಾ.ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿಯೇ ಭಾರತ ಸರ್ಕಾರವು 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
– ರಾಘವೇಂದ್ರ ಅಡಿಗ ಎಚ್ಚೆನ್
