ಮಳೆಗಾಲದಲ್ಲಿ ಭೂಮಿ ತಂಪಾಗುತ್ತದೆ. ಮನಸ್ಸೂ ತಂಪಾಗುತ್ತದೆ. ಬೇಸಿಗೆಯ ಶಾಖದಿಂದ ಉಂಟಾದ ಬಳಲಿಕೆಗೆ ಪರಿಹಾರ ಕೊಡುತ್ತದೆ. ಈ ತಂಪು ಸಮಯದಲ್ಲಿ ಬಿಸಿ ಚಹಾ, ಪಕೋಡ ಮತ್ತು ಲಾಂಗ್ ಡ್ರೈವ್ ಗಳಿಗೆ ಹೋಗಬೇಕು ಎಂಬ ಆಸೆ ಮೊಳೆಯುತ್ತದೆ. ಮಳೆಗಾಲ ಎಷ್ಟು ಆಹ್ಲಾದವನ್ನು ತರುತ್ತದೋ ಅಷ್ಟೇ ಸವಾಲುಗಳನ್ನೂ ಮುಂದಿಡುತ್ತದೆ. ಟ್ರಾಫಿಕ್ ಕಿರಿಕಿರಿ ಉಂಟಾಗುತ್ತದೆ, ಬೀದಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ ಮತ್ತು ಮಳೆಗಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಗ್ಯಾಸ್ಟ್ರೋ ಇಂಟೆಸ್ಟೈನಲ್ (ಜಠರಗರುಳು) ಗೆ ಸಂಬಂಧಿಸಿದ ಶೀತ ಮತ್ತು ಜ್ವರ ಉಂಟಾಗುತ್ತದೆ. ಜೊತೆಗೆ ಮಳೆಗಾಲದಲ್ಲಿ ವಾಹಕಗಳಿಂದ ಹರಡುವ ಕಾಯಿಲೆಗಳು ಹರಡುವುದು ತುಂಬಾ ಸಾಮಾನ್ಯವಾಗಿದೆ.[i],[ii],[iii] ಹಾಗಾಗಿ ಈ ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ಮೇಲೆ ನಿಗಾ ಇಡುವುದು ಬಹಳ ಮುಖ್ಯವಾಗಿದೆ.
ಈ ಕುರಿತು ಬೆಂಗಳೂರಿನ ಸಂಜೀವಿನಿ ಮಕ್ಕಳ ಚಿಕಿತ್ಸಾಲಯದ ಸೀನಿಯರ್ ಕನ್ಸಲ್ಟೆಂಟ್ ಡಾ. ವಿವೇಕಾನಂದ ಕುಷ್ಟಗಿ, “ಸಾಮಾನ್ಯವಾಗಿ ನಾವು ಮಳೆಗಾಲದಲ್ಲಿ ಜನರಲ್ಲಿ ಕಂಡು ಬರುವ ಜ್ವರ, ಗಂಟಲು ನೋವು, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳಂತಹ ಆರೋಗ್ಯ ತೊಂದರೆಗಳು ಅಥವಾ ಲಕ್ಷಣಗಳಲ್ಲಿ 100-150% ಹೆಚ್ಚಳ ಕಾಣುತ್ತೇವೆ. ಮಳೆಗಾಲದಲ್ಲಿ ಇಂಥಾ ಸಮಸ್ಯೆಗಳು ಸಾಮಾನ್ಯ ಎಂದು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ನಿಮ್ಮ ಆರೋಗ್ಯವನ್ನು ರಕ್ಷಿಸಲು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಆರಂಭಿಕ ಹಂತದಲ್ಲಿಯೇ ರೋಗಗಳನ್ನು ಪತ್ತೆ ಹಚ್ಚುವುದು ಬಹಳ ಮುಖ್ಯವಾಗಿದೆ” ಎಂದು ಹೇಳಿದ್ದಾರೆ.
ಈ ಕುರಿತು ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ ಜೆಜೋ ಕರಣ್‌ಕುಮಾರ್, “ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರುವುದು ಸಾಮಾನ್ಯವಾಗಿದೆ. ಹಾಗಾಗಿ ಆ ಕುರಿತ ಅಪಾಯಗಳು, ಮುನ್ನೆಚ್ಚರಿಕೆಗಳು ಮತ್ತು ಆರೋಗ್ಯವನ್ನು ಉತ್ತಮವಾಗಿ ನಿಭಾಯಿಸುವುದು ಎಲ್ಲದರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ. ಸಮಯಕ್ಕೆ ಸರಿಯಾಗಿ ರೋಗವನ್ನು ಪತ್ತೆ ಹಚ್ಚುವುದು ಮತ್ತು ವೈದ್ಯರು ತಿಳಿಸಿದ ಚಿಕಿತ್ಸೆಯನ್ನು ಪಡೆಯುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಳೆಗಾಲವನ್ನು ಆರೋಗ್ಯಕರವಾಗಿ ಆನಂದಿಸಲು ನೆರವಾಗುತ್ತದೆ” ಎಂದು ಹೇಳಿದ್ದಾರೆ.
ಮಳೆಗಾಲದಲ್ಲಿ ನೀವು ಹೆಚ್ಚು ಗಮನ ನೀಡಬೇಕಾದ 5 ಆರೋಗ್ಯ ಪರಿಸ್ಥಿತಿಗಳು
1. ಶೀತ ಮತ್ತು ಜ್ವರ: ಇದ್ದಕ್ಕಿದ್ದಂತೆ ಬದಲಾಗುವ ತಾಪಮಾನ ಮತ್ತು ಥಂಡಿಯಿಂದ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಇದರಿಂದ ವೈರಲ್ ಸೋಂಕು ಸುಲಭವಾಗಿ ಹರಡುತ್ತದೆ.[iv] ಭಾರತದಂತಹ
ಉಷ್ಣವಲಯದ ದೇಶಗಳಲ್ಲಿ ಈ ಸಂದರ್ಭದಲ್ಲಿ ಜ್ವರದ ಪ್ರಕರಣಗಳ ಹೆಚ್ಚು ಕಾಣಿಸಿಕೊಳ್ಳುತ್ತವೆ.[v] ಕೆಮ್ಮು ಅಥವಾ ಗಂಟಲು ನೋವು, ಜ್ವರ, ಕೀಲು ನೋವು ಅಥವಾ ಸ್ನಾಯು ನೋವು, ತಲೆನೋವು, ವಾಕರಿಕೆ ಮತ್ತು ಅತಿಸಾರದಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಹಂತದಲ್ಲಿ ರೋಗಲಕ್ಷಣಗಳ ಕುರಿತು ಗೊಂದಲ ಮಾಡಿಕೊಳ್ಳಬಾರದು. ಜ್ವರವು ಸಾಮಾನ್ಯ ಶೀತಕ್ಕಿಂತ ಹೆಚ್ಚು ತೀವ್ರ ಪರಿಣಾಮಕ್ಕೆ ಕಾರಣವಾಗಬಹುದು. ಹಾಗಾಗಿಯೇ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಬಹಳ ಮುಖ್ಯ.
2. ಫಂಗಲ್ ಇನ್ ಫೆಕ್ಷನ್ ಗಳು: ಫಂಗಲ್ ಇನ್ ಫೆಕ್ಷನ್ ಗಳು ಅಥವಾ ಶಿಲೀಂಧ್ರಗಳ ಸೋಂಕುಗಳು ಥಂಡಿ ವಾತಾವರಣದಲ್ಲಿ, ತೇವಾಂಶವುಳ್ಳ ವಾತಾವರಣದಲ್ಲಿ ಜಾಸ್ತಿ ಉಂಟಾಗುತ್ತದೆ.[vi] ಈ ಸೋಂಕುಗಳು ಅಥ್ಲೀಟ್ಸ್ ಪೂಟ್, ರಿಂಗ್ ವರ್ಮ್ ಮತ್ತು ಯೀಸ್ಟ್ ಸೋಂಕುಗಳಂತಹ ಸಮಸ್ಯೆಗಳನ್ನು ತಂದೊಡ್ಡಬಹುದು.[vii] ತುರಿಕೆ, ಕೆಂಪಾಗುವುಕೆ ಮತ್ತು ಊತ ಇತ್ಯಾದಿಗಳು ಇವುಗಳ ಸಾಮಾನ್ಯ ರೋಗಲಕ್ಷಣಗಳಾಗಿವೆ.
3. ಕರುಳಿನ ಸಮಸ್ಯೆಗಳು: ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು. ಕಲುಷಿತ ನೀರು ಮತ್ತು ಹೊರಗಿನ ಆಹಾರ ಸೇವನೆಯಿಂದ ಅತಿಸಾರ, [viii] ಗ್ಯಾಸ್ಟ್ರೋಎಂಟರೈಟಿಸ್ ಮತ್ತು ಫುಡ್ ಪಾಯಿಸನಿಂಗ್ ನಂತಹ ಜಠರಗರುಳಿನ (ಗ್ಯಾಸ್ಟ್ರೋಇಂಟೆಸ್ಟೈನಲ್) ಸಮಸ್ಯೆಗಳು ಉಂಟಾಗಬಹುದು. ಇಂಥಾ ಸಂದರ್ಭಗಳಲ್ಲಿ ಹೊಟ್ಟೆ ನೋವು, ಸೆಳೆತ, ವಾಕರಿಕೆ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
4. ಮಲೇರಿಯಾ ಮತ್ತು ಡೆಂಗ್ಯೂ: ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದು ಸಾಮಾನ್ಯ. ಹಾಗೆ ನಿಂತಿರುವ ನೀರು ಸೊಳ್ಳೆಗಳಂತಹ ರೋಗವಾಹಕಗಳ ಸಂತಾನೋತ್ಪತ್ತಿಗೆ ಕಾರಣವಾಗಿ ರೋಗಕಾರಕಗಳಿಂದ ಹರಡುವ ರೋಗಗಳಗೆ ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಲೆಕ್ಕಾಚಾರವನ್ನು ನೋಡುವುದಾದರೆ ಭಾರತದಲ್ಲಿ ಮಲೇರಿಯಾ 11% ಮತ್ತು 34% ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತವೆ.[ix] ಜ್ವರ, ಚಳಿ ಮತ್ತು ಬೆವರುವಿಕೆ ಇತ್ಯಾದಿಗಳು ಮಲೇರಿಯಾದ ಪ್ರಮುಖ ಲಕ್ಷಣಗಳಾಗಿವೆ. ತೀವ್ರ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂದೆ ನೋವು, ಕೀಲು ನೋವು ಮತ್ತು ದದ್ದುಗಳು ಉಂಟಾಗುವುದು ಡೆಂಗ್ಯೂವಿನ ಲಕ್ಷಣಗಳಾಗಿವೆ.
ಮಳೆಗಾಲವನ್ನು ಸಂತೋಷಕರವಾಗಿ ಆನಂದಿಸಲು, ಆರೋಗ್ಯ ಕಾಪಾಡಿಕೊಳ್ಳಲು ನಿಮಗೆ ನೆರವಾಗುವ 4 ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:
1. ನೈರ್ಮಲ್ಯತೆ ಕಾಪಾಡಿಕೊಳ್ಳಿ: ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ನೀರು ನಿಲ್ಲದಂತೆ ನೋಡಿಕೊಳ್ಳಿ. ಒಳಚರಂಡಿ ವ್ಯವಸ್ಥೆ ಸರಿ ಇರುವಂತೆ ನಿಗಾ ವಹಿಸಿ. ಸೋಂಕುನಿವಾರಕಗಳನ್ನು ಬಳಸಿ. ಆ ಮೂಲಕ ನಿಮ್ಮ ಮನೆಯನ್ನು ಸೋಂಕುರಹಿತಗೊಳಿಸಿ. ನಿಮ್ಮ ಕೈಗಳನ್ನು ನಿಯಮಿತವಾಗಿ ಸಾಬೂನು ಹಾಕಿ ತೊಳೆದುಕೊಳ್ಳಿ. ವಿಶೇಷವಾಗಿ ಊಟಕ್ಕೆ ಮೊದಲು ಕೈ ತೊಳೆಯಲು ಮರೆಯಲೇಬೇಡಿ. ಚರ್ಮ ಒಣಗಿರುವಂತೆ ನೋಡಿಕೊಳ್ಳಿ. ಗಾಳಿಯಾಡುವ ದಿರಿಸುಗಳನ್ನು ಧರಿಸಿಕೊಳ್ಳಿ. ಉಗುರನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ ಮತ್ತು ಶುದ್ಧತೆ ಕಾಪಾಡಿಕೊಳ್ಳಿ.
2. ಸಮತೋಲಿತ ಆಹಾರ ಸೇವನೆ: ಉತ್ತಮ ಆರೋಗ್ಯ ಹೊಂದಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೋಷಕಾಂಶವುಳ್ಳ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಬೀದಿ ಬದಿ ಆಹಾರಗಳು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡಿದರೂ ಸೋಂಕು ಉಂಟಾಗುವುದನ್ನು ತಪ್ಪಿಸಿಕೊಳ್ಳಲು ಅದರಿಂದ ದೂರವೇ ಇರಿ. ಸೂಕ್ತ ರೀತಿಯಲ್ಲಿ ನೀರು ಕುಡಿಯಿರಿ, ಹೈಡ್ರೇಟ್ ಆಗಿರಿ. ವಿಶೇಷವಾಗಿ ಬಿಸಿ ಮಾಡಿದ ನೀರು ಅಥವಾ ಫಿಲ್ಟರ್ ಮಾಡಿದ ನೀರನ್ನೇ ಕುಡಿಯಿರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ಪಡೆಯಲು ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿಯಂತಹ ಪೋಷಕಾಂಶಗಳನ್ನು ಸೇವಿಸುವುದು ಮುಖ್ಯವಾಗಿದೆ.[x],[xi] ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ನಿಂಬೆಹಣ್ಣು, ಹೂಕೋಸು, ಕಾಳು ಮೆಣಸು, ಬ್ರೊಕೋಲಿ ಮತ್ತು ಇತ್ಯಾದಿಗಳನ್ನು ಹೆಚ್ಚು ಸೇವಿಸಿ.[xii] ಕೆಲವು ಸಂದರ್ಭಗಳಲ್ಲಿ ನಿಮ್ಮ ವೈದ್ಯರು ಸೋಂಕುಗಳಿಂದ ಅಥವಾ ಇನ್ ಫೆಕ್ಷನ್ ಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಹೆಚ್ಚುವರಿ ವಿಟಮಿನ್ ಸಿ ಸಪ್ಲಿಮೆಂಟ್ ಅನ್ನು ನಿಮಗೆ ಶಿಫಾರಸು ಮಾಡಬಹುದಾಗಿದೆ.
3. ಕ್ರಿಯಾಶೀಲರಾಗಿರಿ: ಮಳೆ ನಿಮ್ಮ ದೈನಂದಿನ ದಿನಚರಿ ಮೇಲೆ ಪರಿಣಾಮ ಬೀರಬಹುದು. ಆದರೂ ಕ್ರಿಯಾಶೀಲರಾಗಿರುವುದು ಮುಖ್ಯವಾಗಿದೆ. ಪ್ರತೀ ದಿನ ಮನೆಯೊಳಗೆ ಅಥವಾ ಯಾವುದೇ ಒಳಾಂಗಣಗಳಲ್ಲಿ ಯೋಗ ಅಥವಾ ವರ್ಕೌಟ್ ಮಾಡಿ. ಆ ಮೂಲಕ ನಿಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಿ ಮತ್ತು ನಿಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಿಕೊಳ್ಳಿ. ಇವೆಲ್ಲದರ ಜೊತೆಗೆ ಒಳ್ಳೆ ನಿದ್ರೆ ಮಾಡಿ. ಅದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
4. ರೋಗ ನಿರೋಧಕ ಕ್ರಮಗಳನ್ನು ಕೈಗೊಳ್ಳಿ: ಸೋಂಕುಗಳಿಂದ ನಿಮ್ಮನ್ನು ಮತ್ತು ನಿಮ್ಮ ಸಮುದಾಯವನ್ನು ರಕ್ಷಿಸಿಕೊಳ್ಳುವುದಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ರೋಗ ನಿರೋಧಕ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಮಳೆಗಾಲದ ಆರಂಭದಲ್ಲಿಯೇ ಫ್ಲೂ ಶಾಟ್ ಅಥವಾ ಮಳೆಗಾಲದ ಸೋಂಕು ತಡೆಗಟ್ಟುವ ವ್ಯಾಕ್ಸಿನ್ ಪಡೆಯುವುದರಿಂದ ಮಳೆಗಾಲದ ಸೋಂಕು ಮತ್ತು ಅದಕ್ಕೆ ಸಂಬಂಧಿಸಿದ ತೊಂದರೆಗಳಿಂದ ಪಾರಾಗಲು ಸಹಾಯ ಆಗಬಹು. ಈ ಕುರಿತು ಹೆಚ್ಚು ತಿಳಿದುಕೊಳ್ಳಲು ಮತ್ತು ಅದರಿಂದ ಹೇಗೆ ಸೋಂಕುಗಳನ್ನು ನಿರ್ವಹಿಸಬಹುದು ಎಂಬುದನ್ನು ಅರಿತಿಕೊಳ್ಳಲು ವೈದ್ಯರನ್ನು ಭೇಟಿ ಮಾಡಿ.
ಎಲ್ಲಾ ಮಾಹಿತಿ ತಿಳಿದುಕೊಂಡಿರಿ ಮತ್ತು ಸಿದ್ಧರಾಗಿರಿ. ಆ ಮೂಲಕ ಮಳೆಗಾಲದ ಸಮಯದಲ್ಲಿ ಆರೋಗ್ಯಕರವಾಗಿರಿ.