Kavana on Independence day

In Entertainment & Events
August 03, 2024
ಅಮೃತ ಭಾರತ ಭರತಮಾತೆಯ ಸ್ವಾತಂತ್ರೋತ್ತರ ಕಥನವ ಹೇಳಲು ಹೊರಟಿರುವೆ ನಿರತ ತಿರಂಗಕೆ ಬಲಿದಾನವ ನೀಡಿದ ಅತಿರಥ ಲೋಗರ ಶ್ರಮವಿದುವೆ/ ಹರುಷದ ರಂಗಿನ ಅಮೃತೋತ್ಸವವು ಧೀರರ ನೆತ್ತರ ಪ್ರತಿಫಲವು/ ಕ್ರೂರರ ದಾಸ್ಯದಿ ಮುಕ್ತಿ ಪಡೆದರೂ ಘೋರವು ದೇಶದ ವಿಭಜನೆಯು / ನರನಾಡಿಗಳಲಿ ಜಾಗೃತವಾಯಿತು ಹೋರಾಟ ಹುತಾತ್ಮಾರ್ಪಣೆಯು / ಸಂಭ್ರಮದೊಳಗೆ ಸಂಕಟವಿದ್ದರು ಸವಾಲನೆದುರಿಸೊ ದಿಟ್ಟತೆಯು // ರಾಜರಾಡಳಿತ ಒಗ್ಗೂಡಿಸುತ ತೇಜವು ಹೆಚ್ಚಿತು ತಾಯ್ನೆಲದಿ / ಭಾಜನವಾಯಿತು ಸಂವಿಧಾನವು ಯೋಜನೆ ಸಫಲವು ಈ ನೆಲದಿ // ಕಾನೂನಿನ ಹಕ್ಕು ನೀಡಲು ಮಹಿಳೆಗೆ ಬೇನೆಯು ಕಳಚಲು ಪ್ರೇರಣೆಯು / ಅನ್ನದಾತನಿಗೆ ತೆರಿಗೆ ವಿನಾಯಿತಿ ಪಂಚವಾರ್ಷಿಕ ಯೋಜನೆಯು // ಎಮ್ಮಯ ನೆಲದಲಿ ಪ್ರಜೆಯೇ ಪ್ರಭುವು ಹೆಮ್ಮೆಯು ಕೀರ್ತಿಯು ಉಜ್ವಲವು/ ಮಾನವೀಯ ಸಹಕಾರದ ಮಂತ್ರವೆ ಆತ್ಮ ನಿರ್ಭರತೆ ಜ್ವಲಂತವು // ಸಹಬಾಳ್ವೆ ಸಮಾನತೆ ನಂಬಿಕೆ ನಿಷ್ಠೆ ಸ್ವಾವಲಂಬನೆಯೆ ತಳಹದಿಯು / ಸನಾತನ ಸಂಸ್ಕೃತಿ ಮಿಳಿತಗೊಳ್ಳಲು ನವಭಾರತದ ಉನ್ನತಿಯು // ದೇಶವು ಏಕತೆ ಅಖಂಡತೆ ಮೆರೆದಿದೆ ಸಂಘರ್ಷಗಳನು ಬದಿಗಿರಿಸಿ / ಸಮೃದ್ಧ ಭಾರತವೆ ಒಡಲೊಳಗಿರಲು ಸ್ವದೇಶಿ ತತ್ವವನನುಸರಿಸಿ / ಶ್ರೀಮತಿ ರಮ್ಯಶ್ರೀ ಭರತ್ ತಿಪಟೂರು.