ಸುಮುಖ ಗಣಪತಿ

In Entertainment & Events
August 13, 2024
ಭಾವಿಸುವವರು ಭಾವಿಸಿದಂತೆ ಭಗವಂತ ಎಂದು ಹೇಳುವುದಕ್ಕೆ ವಿಶ್ವವ್ಯಾಪಿಯಾದ ಬಹುರೂಪಿ ಗಣೇಶನನ್ನು ನೋಡುತ್ತೇವೆ. ಆನೆ ಮೊಗದವನಾಗಿಯೂ, ದೊಡ್ಡ ಹೊಟ್ಟೆಯವನಾಗಿಯೂ, ಇಲಿಯ ವಾಹನವನ್ನಾಗಿ ಹೊಂದಿದವನಾಗಿಯೂ, ದೇವರು ಗಣೇಶ, ಚಿತ್ರಿತವಾದಷ್ಟು ಸುಲಭಸಾಧ್ಯವಾಗಿ, ಸರಳ ಕಲಾತ್ಮಕವಾಗಿ, ಬೇರೆ ಯಾವ ದೇವರಿಗೂ ಇಷ್ಟೊಂದು ರೂಪಗಳು ಸಿಕ್ಕಿಲ್ಲ. ಬಾಲ ಬ್ರಹ್ಮಚಾರಿಯಿಂದ ಸಿದ್ದಿ-ಬುದ್ಧಿಯರನ್ನೊಳಗೊಂಡ ಶೂರ್ಪಕರ್ಣನನ್ನು ಸಾಲದೆಂಬಂತೆ ಮುದ್ಗಲ ಮತ್ತು ಗಣೇಶ ಪುರಾಣದಲ್ಲಿ ಕ್ರಮವಾಗಿ 32 ಮತ್ತು 108 ಬಗೆಯ ರೂಪದಲ್ಲಿ ಕಲ್ಪಿಸಿರುವುದನ್ನು ಕಾಣುತ್ತೇವೆ . ಗಣಪತಿಯು ವಿಷ್ನ ನಿವಾರಕನಾಗಿ ಜ್ಞಾನ ಮತ್ತು ಬುದ್ಧಿಯ ಪ್ರದಾಯಕನಾಗಿ ಎಲ್ಲರಿಂದಲೂ ಮೊದಲ ಪೂಜೆಯನ್ನು ಪಡೆಯುವ ವಿಶ್ವಂಭರ ಮೂರ್ತಿ. ಆಶ್ಚರ್ಯದ ಸಂಗತಿ ಏನೆಂದರೆ, ಜಾವ, ಕಾಂಬೋಡಿಯ, ಚೀನಾ, ಜಪಾನ್, ಶ್ರೀಲಂಕಾ ಮೊದಲಾದ 13 ದೇಶಗಳಲ್ಲಿ ಗಣೇಶನ ಪ್ರಮುಖ ದೇವಾಲಯಗಳು ಇದ್ದು ಅನಂಗಪೂಜಿತನು ಬಹುರೂಪದಲ್ಲಿ ಇಲ್ಲಿ ಚಿತ್ರತವಾಗಿರುವುದನ್ನು ಕಾಣಬಹುದು.ಮಧ್ಯ ಭಾರತದ ಭಾಗಗಳಲ್ಲಿ ಗಾಣಪತ್ಯರು (ಗಣೇಶನನ್ನು ಸಗುಣ ಬ್ರಹ್ಮನ್ ಆಗಿ ಪೂಜಿಸುವ ಒಂದು ಪಂಥ) ಹೆಚ್ಚಾಗಿ ಕಂಡುಬಂದು, ಮಹಾರಾಷ್ಟ್ರದಲ್ಲಿಯೂ ಗಣಪತಿಯ ಆರಾಧನೆಯನ್ನು ಹೆಚ್ಚಾಗಿ ಕಾಣುತ್ತೇವೆ . ಪೃಥ್ವಿ ತತ್ವವನ್ನು ಪ್ರತಿಪಾದಿಸುವ ಸುಮುಖನ ವಿಗ್ರಹಗಳನ್ನು ಮಣ್ಣಿನಿಂದ ತೊಡಗಿ, ಬೆಳ್ಳಿ, ಚಿನ್ನ, ಪಂಚಲೋಹ, ಚಂದನಾಡಿ ಮರಗಳು, ಸಿರಾಮಿಕ್, ಪ್ಲಾಸ್ಟೊಪಾರಿಸ್, ಪ್ಲಾಸ್ಟಿಕ್ ಅನ್ನು ಒಳಗೊಂಡಂತೆ ಶಿಲಾ ವಿಗ್ರಹಗಳಲ್ಲಿ ನೋಡುತ್ತೇವೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ನಲ್ಲಿರುವ ರಮಣಶ್ರೀ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಎರಡು ಸಾವಿರದ ಆರು ನೂರಕ್ಕೂ ಹೆಚ್ಚು ವಿವಿಧ ವಿನ್ಯಾಸದ ವಿನಾಯಕನ ವಿಗ್ರಹಗಳ ವಿಶಿಷ್ಟ ನೋಟವೇ ಇಲ್ಲಿದೆ. "ನಾನು ದೇವರನ್ನು ಪ್ರೀತಿಸುತ್ತೇನೆ. ದೇವರು ನನ್ನನ್ನು ಪ್ರೀತಿಸುತ್ತಾನೆ" ಎಂಬ ಭಕ್ತಿ ಪ್ರೇಮದ ಅವಿನಾಭಾವದ ಸಂಕೇತವಾಗಿ, ಎಸ್ ಷಡಕ್ಷರಿ ಅವರ ಸಂಗ್ರಹಕ್ಕೆ ಸಾಕ್ಷಿಯಾಗಿ, ಎಲ್ಲೆಲ್ಲೂ ನೋಡಲು ಶಿವಸುತನನ್ನೇ ಕಾಣುತ್ತೇವೆ. ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ಕಂಡು ಬರುವ ಧಾರ್ಮಿಕ ಹಿನ್ನೆಲೆಯ ವಿಗ್ರಹಗಳು ಇಲ್ಲಿವೆ. ಗಜವದನನನ್ನು ಇಲ್ಲಿ ದ್ವಿಮುಖ, ತ್ರಿಮುಖ, ಪಂಚ ಮುಖವಿರುವ ವಿಗ್ರಹಗಳಲ್ಲಿಯೂ ಕಾಣಬಹುದು. ಒಂದರಂತಿಲ್ಲದ ಪ್ರತಿಯೊಂದು ಮೂರ್ತಿಗಳು ವಿಭಿನ್ನವಾಗಿದ್ದು, ಗಣೇಶನನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ, ಕಲಾತ್ಮಕವಾಗಿ, ಸ್ನೇಹಿತನಾಗಿ, ಚಿತ್ರಿಸುತ್ತಿವೆ. ದ್ವಿಭುಜ ಗಳಿಂದ ತೊಡಗಿ ಅಷ್ಟ ಭುಜಗಳನ್ನೊಳಗೊಂಡ ಗಣೇಶನ ವಿಗ್ರಹಗಳಿವೆ. ವರಗಣಪತಿಯ ಒಂದೊಂದು ಮೂರ್ತಿಗಳಲ್ಲಿಯೂ ವಿಭಿನ್ನ ಆಯುಧಗಳಿವೆ. ಪುಸ್ತಕ, ಜಪಮಾಲೆ, ದಂಡ, ಕಮಂಡಲ, ಮೋದಕ, ಹಗ್ಗ, ಅಂಕುಶ, ಬೇಲದ ಹಣ್ಣು, ಮಾವಿನ ಹಣ್ಣು, ನೇರಳೆ ಹಣ್ಣು, ಕಬ್ಬು ,ಬಿಲ್ಲು, ಬಾಣ, ಗದೆ, ಭತ್ತದ ತೆನೆ, ಕಮಲದ ಹೂವು, ತನ್ನದೇ ದಂತ ಹೀಗೆ ವೈವಿದ್ಯತೆಯ ವಸ್ತುಗಳು ಕರಿಮುಖನ ಕರಗಳನ್ನಲಂಕರಿಸಿವೆ. ಮಣಿಹಾರ ಭೂಷಿತನಾಗಿ, ರತ್ನ ಕಿರೀಟಧರನಾಗಿ, ತಲೆಯಲ್ಲಿ ಅರ್ಧ ಚಂದ್ರನನ್ನು ಧರಿಸಿದವನಾಗಿ, ವರದಮುದ್ರೆ ಅಭಯಮುದ್ರೆಗಳಲ್ಲಿ ಬಾಲಸೂರ್ಯನಂತೆ ಇಲ್ಲಿ ಕಾಣಿಸಿಗುತ್ತಾನೆ. ಮೂರು ಕಣ್ಣುಳ್ಳ ಏಕದಂತ, ಯೋಗಸ್ಥನಾದ ಭಂಗಿ, ವಿವಿಧ ವಿಶ್ರಾಂತಿಯ ಭಂಗಿಗಳನ್ನೊಳಗೊಂಡಂತೆ, ನಾಟ್ಯವಾಡುತ್ತಿರುವ ಮೂರ್ತಿಗಳಿವೆ. ವಾದ್ಯ ನುಡಿಸುತ್ತಿರುವ ಗಜಾನನ, ಓದುತ್ತಿರುವ, ಬರೆಯುತ್ತಿರುವ, ಲ್ಯಾಪ್ಟಾಪ್ ನಲ್ಲಿ ಮಗ್ನನಾಗಿರುವ, ಮೊಬೈಲ್ ಹಿಡಿದು ಸಂಭಾಷಿಸುತ್ತಿರುವ, ಬ್ಯಾಟ್ ಹಿಡಿದು ಚಂಡಿಗೆ ಕಾಯುತ್ತಿರುವ ಗಜವಕ್ರನ ಅವತಾರಗಳನ್ನು ನೋಡುವಾಗ ನಮಗವನು