ಭವ್ಯ ಭಾರತದ 5ನೇ ಪ್ರಧಾನಿ ಹಾಗೂ ರೈತನಾಯಕ ದಿ. ಚೌದರಿ ಚರಣ್ಸಿಂಗ್ ಅವರ ಅಭಿಲಾಷೆ – ಇಚ್ಛೆ – ಆಸೆಯಂತೆ ಅವರ ಜನ್ಮದಿನದ ಸಂಸ್ಮರಣೆಯನ್ನು ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
” ಕೈ ಕೆಸರಾದರೆ ಬಾಯಿ ಮೊಸರು ” ಎಂಬರ್ಥದಲ್ಲಿಯೇ ಕೆಲಸವನ್ನು ಮಾಡುವ ರೈತನು ತನ್ನ ನೈಜವಾದ ಕಾಯಕದಲ್ಲಿಯೇ ಭಗವಂತನನ್ನು ಕಾಣುತ್ತಾ ಯಾವಾಗಲೂ ಕೂಡ ಸದೃಢನಾಗಿ ಆರೋಗ್ಯದಿಂದ ಇರುತ್ತಾನೆ – ಸಮಸ್ತ ಎಲ್ಲಾ ಜನರಿಗೂ ಕೂಡ ಆಹಾರವನ್ನು ಒದಗಿಸುತ್ತಾ ಎಲ್ಲರ ಹಸಿವನ್ನು ನೀಗಿಸುತ್ತಾ , ಅದರಂತೆ ದೇಶದ ಬೆನ್ನೆಲುಬಾಗಿದ್ದು ಅನ್ನದಾತನು ಆಗಿರುತ್ತಾನೆ.
ನೈಜ ನೇಗಿಲ ಯೋಗಿಗೆ ನಮನ
ರಾಷ್ಟ್ರೀಯ ಕೃಷಿಕರ ದಿನದಂದು ಎಲ್ಲ ಕಾಲಗಳಲ್ಲೂ ಕಷ್ಟಪಟ್ಟು ದುಡಿದು ಲೋಕದ ಹೊಟ್ಟೆ ತುಂಬಿಸುವ ಕೃಷಿಕರಿಗೆ ಮತ್ತು ಅವರ ಕುಟುಂಬಗಳಿಗೆ ನಮನ ಸಲ್ಲಿಸಬೇಕು. ಇದು ನಮ್ಮ ಬದುಕಿಗೇ ನಾವು ಅರ್ಪಿಸುವ ಕೃತಜ್ಞತೆ.
ಕೃಷಿಯನ್ನವಲಂಭಿಸಿದವರ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಸ್ಥಿರತೆ ಇದೆ ಎಂಬುದು ಭಾರತದಂತಹ ದೇಶದಲ್ಲಿ ಪ್ರಶ್ನೆಯಾಗೇ ಉಳಿದಿದೆ. ಉಳುವವನಿಗೆ ಭೂಮಿ ಎಂದು ಭೂಮಾಲೀಕರ ಹಿಡಿತದಿಂದ ಒಂದು ಕಾಲದಲ್ಲಿ ಭೂಮಿ ಅನೇಕ ಉಳುವವರಿಗೆ ಹಸ್ತಾಂತರವಾಯಿತು. ಆದರೂ ಎಲ್ಲೋ ಒಂದೆಡೆ ಭೂಮಿಯನ್ನು ಹೊಂದಿದವರೆಲ್ಲ ರೈತರು ಎಂಬ ಹಣೆ ಪಟ್ಟಿಯಲ್ಲಿ ರೈತರೆಂದು ಹಣೆಪಟ್ಟಿಕೊಂಡು ತಮ್ಮದೇ ಸಾಮ್ರಾಜ್ಯ ಮಾಡಿಕೊಂಡಿರುವ ಶ್ರೀಮಂತಿಕೆ ಹೊಂದಿದ ಜನಾಂಗಕ್ಕೆ ಕಮ್ಮಿ ಇಲ್ಲ. ಹಾಗಾಗಿ ಸಮಾನತೆ ಎಂಬುದು ನಿರಂತರ ದೂರವೇ. ಕೃಷಿಯಲ್ಲಿ ಉತ್ಪಾದನೆಯಲ್ಲಿ ಆಧುನಿಕತೆ ಬರಲು, ಕೃಷಿಯೇ ಉದ್ಯಮವಾಗಬೇಕೆಂಬ ವಾದದಲ್ಲಿ ಕೃಷಿಭೂಮಿಗಳೆಲ್ಲ ದೊಡ್ಡ ದೊಡ್ಡ ಕುಳಗಳ, ರಾಜಕಾರಣಿಗಳ, ಉದ್ಯಮಿಗಳ, ರಿಯಲ್ ಎಸ್ಟೇಟ್ ದೊರೆಗಳ, ಅಂತರರಾಷ್ಟ್ರೀಯ ಶಕ್ತಿಗಳ ಕೈಸೇರುತ್ತಲಿವೆ.
ಒಂದು ಕಾಲದಲ್ಲಿ ರೈತರ ದೊಡ್ಡತನ ಆತ ಎಷ್ಟು ಬೆಳೆಯುತ್ತಾನೆ ಎಂಬ ಮಾಪನದಲ್ಲಿತ್ತು. ಈಗ ಆತನ ಭೂಮಿ ಎಷ್ಟು ಮೌಲ್ಯದಲ್ಲಿ ಮಾರಾಟವಾಗಬಲ್ಲದು ಎಂಬ ಮಾಪನದಲ್ಲಿದೆ. ಬಡರೈತ ತಾನು ಬೆಳೆದದ್ದನ್ನು ಎಂದೂ ಗ್ರಾಹಕವರ್ಗಕ್ಕೆ ಮಾರಿ ನ್ಯಾಯಬೆಲೆ ಪಡೆವುದು ಸಾಧ್ಯವಾಗುವುದೇ ಇಲ್ಲ. ಒಬ್ಬ ಗ್ರಾಹಕ ಒಂದು ಕೃಷಿ ಉತ್ಪನ್ನವನ್ನು ನೂರಕ್ಕೆ ಕೊಂಡರೆ ಅದನ್ನು ಬೆಳೆದವನಿಗೆ ಪುಡಿಗಾಸು ಸಂದಾಯವಾಗಲು ನಡೆಸಬೇಕಾದ ಪರದಾಟ ಅಪಾರವಾದದ್ದು. ಮಧ್ಯವರ್ತಿಗಳದ್ದೇ ಸಾಮ್ರಾಜ್ಯ. ಸಾಲ ನೀಡುವುದು, ಸಾಲ ಮನ್ನಾ ಇತ್ಯಾದಿಗಳೆಲ್ಲ ರೈತನ ಬಾಳನ್ನಾಗಲಿ ದೇಶದ ಬದುಕನ್ನಾಗಲಿ ಹಸನುಗೊಳಿಸಿಲ್ಲ. ಎಲ್ಲ ರೈತರೂ ತಮ್ಮ ಮಕ್ಕಳು ಕೃಷಿಯನ್ನವಲಂಬಿಸದೆ ಓದಿ ನೌಕರಿ ಹಿಡಿಯಬೇಕೆಂದು ಚಿಂತಿಸುವುದು ತಮ್ಮ ಕಷ್ಟ ತಮ್ಮ ಮಕ್ಕಳಿಗೆ ಬರದಿರಲಿ ಎಂಬುದೇ ಆಗಿದೆ. ನಮ್ಮ ತಾತನ ಕಾಲದಲ್ಲಿ ಕೃಷಿಕರಾಗಿದ್ದ ಕುಟುಂಬ, ಅಪ್ಪನ ಕಾಲದಲ್ಲಿ ಪಟ್ಟಣ, ನಮ್ಮ ಕಾಲದಲ್ಲಿ ನಗರ, ನಮ್ಮ ಮಕ್ಕಳ ಕಾಲದಲ್ಲಿ ಅಂತರರಾಷ್ಟ್ರೀಯ ಅಂತ ಆಗಿದೆ.
ಕೃಷಿಕ ತಾನು ನೆಮ್ಮದಿಯಾಗಿ ಬದುಕಿ ತನ್ನ ದುಡಿಮೆಯಿಂದ ಬದುಕಿನ ಬಗ್ಗೆ ಭರವಸೆ ಹೊಂದಿದಾಗ ಮಾತ್ರವೇ ಸಮಾಜಕ್ಕೊಂದು ಬೆಲೆ. ಹೇಗೋ ಎಲ್ಲಿಂದಲೋ ಯಾವುದೋ ರೂಪದಲ್ಲಿ ನಮಗೆ ಬೇಕಾದ ಆಹಾರ ಪದಾರ್ಥವೂ ಸಮೀಪದ ಅಂಗಡಿಯಲ್ಲಿ ಸಿಗುತ್ತಿದೆ ಎಂಬುದು ಕೃಷಿಯಾಧಾರಿತ ಬದುಕಿನ ಲಕ್ಷಣ ಎಂದು ಹೇಳುವುದಕ್ಕಾಗುವುದಿಲ್ಲ. ಅದೊಂದು ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರದ ಸರಕು ಸಾಗಾಣಿಕೆ ವ್ಯವಸ್ಥೆಯ ಸ್ವರೂಪ.
ಎಲ್ಲವನ್ನೂ ನಗದೀಕರಣಗೊಳಿಸುವ ಇಂದಿನ ಯುಗದಲ್ಲಿ ಭೂಮಿ ಮತ್ತು ಮನುಷ್ಯನ ಸ್ವಭಾವಗಳೂ ಒಂದು ರೀತಿಯ ಮಾರುಕಟ್ಟೆ ಸರಕುಗಳೇ. ಅದು ಮಾನವನ ಬದುಕಿನ ರೀತಿಯನ್ನಾಗಲಿ, ಸಂಸ್ಕೃತಿಯನ್ನಾಗಲಿ ಬಣ್ಣಿಸಲಾರವು.
ಇಂದೂ ಮಣ್ಣಿಗೆ ನಿಷ್ಟವಾಗಿ ಬದುಕುತ್ತಿರುವ ಜೀವಿಗಳು ನಮ್ಮೊಡನಿದ್ದಾರೆ. ಅವರ ಸಂತತಿ ವ್ಯಾಪಿಸಲಿ. ಕೃಷಿ ಉಳಿಯಲಿ, ಈ ಲೋಕದ ಸೌಂದರ್ಯ ಉಳಿಯಲಿ, ಜನರಮನದ ಹೃದಯಗಳಲ್ಲಿ ಹಸುರು ಉಸಿರಾಗಿರಲಿ.
ನೇಗಿಲ ಯೋಗಿ – ರೈತ ಗೀತೆ
– ರಾಷ್ಟ್ರಕವಿ ಕುವೆಂಪು
ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದೆ ಸೇವೆಯೆ ಪೂಜೆಯು
ಕರ್ಮವೆ ಇಹ ಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ.
ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ.
ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣುಣಿ ನೆಗಿಲಿನಾಶ್ರಯದಿ;
ನೇಗಿಲ ಹಿಡಿದು ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು.
ನೇಗಿಲ ಬಲದೊಳು ವೀರರು ಮೆರೆದರು,
ಶಿಲ್ಪಿಗಳೆಸೆದರು, ಕವಿಗಳು ಬರೆದರು.
ಯಾರು ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ;
ನೇಗಿಲ ಮೇಲೆಯೆ ನಿಂತಿದೆ ಧರ್ಮ
ರಾಷ್ಟ್ರೀಯ ರೈತ ದಿನಾಚರಣೆಯ ಹಾಗೂ ಮಾಜಿ ಪ್ರಧಾನಿ ದಿ. ಚೌಧರಿ ಚರಣ್ ಸಿಂಗ್ ರವರ ಜನ್ಮದಿನದ ಸವಿನೆನಪುಗಳು
ಜೈ ಕಿಸಾನ್ – ಜೈ ಜವಾನ್ – ಅನ್ನದಾತ ಸುಖೀಭವ