ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು
~ ಆಯ್ದಕ್ಕಿ ಮಾರಯ್ಯ
ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ
~ ಆಯ್ದಕ್ಕಿ ಲಕ್ಕಮ್ಮ
ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ.
~ ಬಸವಣ್ಣ
ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು
~ ನುಲಿಯ ಚಂದಯ್ಯ
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ
~ ಹುಲ್ಲು ಹೊರುವ ಕಾಯಕದ ಸೋಮಯ್ಯ
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ
~ ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ
ಖಂಡಿತ ಕಾಯಕದ ವ್ರತಾಂಗಿಯ ಮಾಟದ ಇರವೆಂತೆಂದಡೆ
ಕೃತ್ಯದ ನೇಮದ ಸುಯಿದಾನವ ಅಚ್ಚೊತ್ತಿದಂತೆ ತಂದು
ಒಡೆಯರ ಭಕ್ತರ ತನ್ನ ಮಡದಿ ಮಕ್ಕಳು ಸಹಿತಾಗಿ ಒಡಗೂಡಿ,
ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ, ಈಡಿಲ್ಲದಂತೆ,
ಬಿಡುಮುಡಿಯನರಿಯದೆ,
ಮತ್ತೆ ಇರುಳೆಡೆಗೆಂದಿರಿಸದೆ, ಹಗಲೆಡೆಯ ನೆನೆಯದೆ,
ಇಂದಿಗೆ ನಾಳಿಗೆ ಎಂಬ ಸಂದೇಹಮಂ ಬಿಟ್ಟು
ಮುಂದಣ ಕಾಯಕ ಅಂದಂದಿಗೆ ಉಂಟು ಎಂಬುದನರಿತು
ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ
ಸದಾನಂದದಲ್ಲಿಪ್ಪ ಭಕ್ತನಂಗಳ ಮಂಗಳಮಯ ಕೈಲಾಸದ ಆಚಾರವೆ
ಪ್ರಾಣವಾದ ರಾಮೇಶ್ವರಲಿಂಗದ ಬೆಳಗು
~ ಏಲೇರಿಯ ಅಕ್ಕಮ್ಮ