ಅಮೃತ ಭಾರತ ಭರತಮಾತೆಯ ಸ್ವಾತಂತ್ರೋತ್ತರ ಕಥನವ ಹೇಳಲು ಹೊರಟಿರುವೆ
ನಿರತ ತಿರಂಗಕೆ ಬಲಿದಾನವ ನೀಡಿದ ಅತಿರಥ ಲೋಗರ ಶ್ರಮವಿದುವೆ/ ಹರುಷದ ರಂಗಿನ ಅಮೃತೋತ್ಸವವು ಧೀರರ ನೆತ್ತರ ಪ್ರತಿಫಲವು/
ಕ್ರೂರರ ದಾಸ್ಯದಿ ಮುಕ್ತಿ ಪಡೆದರೂ ಘೋರವು ದೇಶದ ವಿಭಜನೆಯು / ನರನಾಡಿಗಳಲಿ ಜಾಗೃತವಾಯಿತು ಹೋರಾಟ ಹುತಾತ್ಮಾರ್ಪಣೆಯು / ಸಂಭ್ರಮದೊಳಗೆ ಸಂಕಟವಿದ್ದರು ಸವಾಲನೆದುರಿಸೊ ದಿಟ್ಟತೆಯು // ರಾಜರಾಡಳಿತ ಒಗ್ಗೂಡಿಸುತ ತೇಜವು ಹೆಚ್ಚಿತು ತಾಯ್ನೆಲದಿ / ಭಾಜನವಾಯಿತು ಸಂವಿಧಾನವು ಯೋಜನೆ ಸಫಲವು ಈ ನೆಲದಿ // ಕಾನೂನಿನ ಹಕ್ಕು ನೀಡಲು ಮಹಿಳೆಗೆ ಬೇನೆಯು ಕಳಚಲು ಪ್ರೇರಣೆಯು / ಅನ್ನದಾತನಿಗೆ ತೆರಿಗೆ ವಿನಾಯಿತಿ ಪಂಚವಾರ್ಷಿಕ ಯೋಜನೆಯು //
ಎಮ್ಮಯ ನೆಲದಲಿ ಪ್ರಜೆಯೇ ಪ್ರಭುವು ಹೆಮ್ಮೆಯು ಕೀರ್ತಿಯು ಉಜ್ವಲವು/ ಮಾನವೀಯ ಸಹಕಾರದ ಮಂತ್ರವೆ ಆತ್ಮ ನಿರ್ಭರತೆ ಜ್ವಲಂತವು //
ಸಹಬಾಳ್ವೆ ಸಮಾನತೆ ನಂಬಿಕೆ ನಿಷ್ಠೆ ಸ್ವಾವಲಂಬನೆಯೆ ತಳಹದಿಯು /
ಸನಾತನ ಸಂಸ್ಕೃತಿ ಮಿಳಿತಗೊಳ್ಳಲು ನವಭಾರತದ ಉನ್ನತಿಯು //
ದೇಶವು ಏಕತೆ ಅಖಂಡತೆ ಮೆರೆದಿದೆ ಸಂಘರ್ಷಗಳನು ಬದಿಗಿರಿಸಿ /
ಸಮೃದ್ಧ ಭಾರತವೆ ಒಡಲೊಳಗಿರಲು ಸ್ವದೇಶಿ ತತ್ವವನನುಸರಿಸಿ /
ಶ್ರೀಮತಿ ರಮ್ಯಶ್ರೀ ಭರತ್ ತಿಪಟೂರು.